Wednesday, December 30, 2009
ಹಾಡು ಮುಗಿಸಿದ ಅಶ್ವತ್ಥ್ :(
ಮೂತ್ರಕೋಶ ಹಾಗೂ ಪಿತ್ತಜನಕಾಂಗದ ತೊಂದರೆಯಿಂದ ಬಳಲುತ್ತಿದ್ದ ಸಿ.ಅಶ್ವತ್ಥ್ ಅವರನ್ನು ಇದೇ 17ರಂದು ಯಶವಂತಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮಂಗಳವಾರ ಬೆಳಿಗ್ಗೆ 10.45ಕ್ಕೆ ಆಸ್ಪತ್ರೆಯಲ್ಲಿ ನಿಧನರಾದರು.
ಬೆಂಗಳೂರು: ‘ಕನ್ನಡವೇ ಸತ್ಯ’ ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ಕನ್ನಡಿಗರಲ್ಲಿ ನಾಡಪ್ರೇಮ ಹೆಚ್ಚಿಸುವುದರ ಜೊತೆಗೆ ಗಾಯನಕ್ಕೆ ಹೊಸ ಪರಿಭಾಷೆ ನೀಡಿದ ಮತ್ತು ಸುಗಮ ಸಂಗೀತದ ಬಗ್ಗೆ ಅಭಿಮಾನ ಮೂಡಿಸಿದ ಹಿರಿಯ ಗಾಯಕ ಸಿ.ಅಶ್ವತ್ಥ್ (70) ಮಂಗಳವಾರ ತಮ್ಮ ಜೀವನಗೀತೆಗೆ ಕೊನೆ ಹಾಡಿದರು.
ಮೂತ್ರಕೋಶ ಹಾಗೂ ಪಿತ್ತಜನಕಾಂಗದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಇದೇ 17ರಂದು ಯಶವಂತಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮಂಗಳವಾರ ಬೆಳಿಗ್ಗೆ 10.45ಕ್ಕೆ ಆಸ್ಪತ್ರೆಯಲ್ಲಿ ನಿಧನರಾದರು. ಅವರ ಪಾರ್ಥೀವ ಶರೀರವನ್ನು ನರಸಿಂಹರಾಜ ಕಾಲೊನಿಯ ಸ್ವಗೃಹಕ್ಕೆ ತರಲಾಯಿತು. ನಂತರ ಸಾರ್ವಜನಿಕರ ದರ್ಶನಕ್ಕಾಗಿ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಇಡಲಾಗಿತ್ತು. ಅವರು ಪತ್ನಿ ಚಂದ್ರಾ, ಒಬ್ಬ ಪುತ್ರ, ಒಬ್ಬ ಪುತ್ರಿಯನ್ನು ಅಗಲಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮಂಗಳವಾರ ಅವರ 71ನೇ ಹುಟ್ಟುಹಬ್ಬ ಅದ್ಧೂರಿಯಾಗಿ ನಡೆಯಬೇಕಿತ್ತು. ಅಭಿಮಾನಿಗಳು ಹಲವು ದಿನಗಳಿಂದ ಹುಟ್ಟುಹಬ್ಬ ಆಚರಣೆ ಸಿದ್ದತೆಗಳನ್ನು ಮಾಡಿಕೊಂಡಿದ್ದರು. ಆದರೆ ಹುಟ್ಟುಹಬ್ಬದ ದಿನವೇ ಇಹಲೋಕ ತ್ಯಜಿಸಿದ ಕಾರಣ ಕಾರ್ಯಕ್ರಮ ನಡೆಯಲಿಲ್ಲ. ಬದಲಿಗೆ ಅಭಿಮಾನಿಗಳು ಕಂಬನಿ ಮಿಡಿದು ಶೋಕ ವ್ಯಕ್ತಪಡಿಸಿದರು. ಸಂಜೆ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು, ಗಣ್ಯರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿತು.
click here
ಸುಗಮ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ವಿಶಿಷ್ಟ ಛಾಪು ಮತ್ತು ವಿಭಿನ್ನ ಆಯಾಮ ನೀಡಿದ ಅವರು ಕನ್ನಡಿಗರ ಮನೆ ಮಾತಾಗಿದ್ದರು. ಸಂಗೀತ, ರಂಗಭೂಮಿ, ಸುಗಮ ಸಂಗೀತ ಮತ್ತು ಚಲನಚಿತ್ರ ಕ್ಷೇತ್ರಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದ ಅಶ್ವತ್ಥ್ ಅವರು ತಮ್ಮ ಕಂಚಿನ ಕಂಠದ ಮೂಲಕ ರಾಜ್ಯದಲ್ಲಿ ಅಷ್ಟೇ ಅಲ್ಲದೆ ದೇಶ, ವಿದೇಶಗಳಲ್ಲೂ ಜನಪ್ರಿಯತೆ ಗಳಿಸಿದ್ದರು.
1939ರ ಡಿಸೆಂಬರ್ 29ರಂದು ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣದಲ್ಲಿ ಜನಿಸಿದ್ದ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ವಿಜ್ಞಾನದಲ್ಲಿ ಪದವಿ ಪಡೆದಿದ್ದರು. ಕಳೆದ ವರ್ಷವಷ್ಟೇ ಬೆಂಗಳೂರು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು. ಭಾರತೀಯ ದೂರವಾಣಿ ಕಾರ್ಖಾನೆಯಲ್ಲಿ (ಐಟಿಐ) 27 ವರ್ಷಗಳ ಕಾಲ ಸೇವೆ ಸಲ್ಲಿಸಿ, 1992ರಲ್ಲಿ ಸ್ವಯಂ ನಿವೃತ್ತಿ ಹೊಂದಿದ ಅವರು ಹೆಚ್ಚಿನ ಸಮಯವನ್ನು ಸುಗಮ ಸಂಗೀತ ಕ್ಷೇತ್ರಕ್ಕೆ ಮೀಸಲಿಟ್ಟಿದ್ದರು.
ದೊಡ್ಡ ದೊಡ್ಡ ಕನಸುಗಳನ್ನು ಕಂಡಿದ್ದು ಅಲ್ಲದೆ ಹಠ ಹಿಡಿದು ಅವುಗಳನ್ನು ನನಸಾಗಿಸಿದವರು. ಸುಗಮ ಸಂಗೀತಕ್ಕೆ ಹೊಸ ತಿರುವು ನೀಡಿದವರಲ್ಲಿ ಪ್ರಮುಖರಾಗಿದ್ದರು. ಅಷ್ಟೇ ಜನಪ್ರಿಯ ಗಾಯಕರಾಗಿದ್ದರು.
ಚಿಕ್ಕವಯಸ್ಸಿನಲ್ಲೇ ಹಾಡುವುದನ್ನು ಕರಗತ ಮಾಡಿಕೊಂಡಿದ್ದ ಅಶ್ವತ್ಥ್, ಶಾಲೆಯಲ್ಲಿ ಮೇಷ್ಟ್ರು ಹಾಡು ಹೇಳು ಎಂದ ಕೂಡಲೇ ‘ಮಾಡು ಸಿಕ್ಕದಲ್ಲ’....ಎಂದು ಶುರು ಹಚ್ಚಿಕೊಳ್ಳುತ್ತಿದ್ದರು. ಕುವೆಂಪು ಅವರ ವೈಚಾರಿಕ ಗೀತೆಗಳಿಗೆ ರಾಗ ಸಂಯೋಜನೆ ಮಾಡಿದ ದೈತ್ಯ ಪ್ರತಿಭೆ. ‘ಸ್ಮಶಾನ ಕುರುಕ್ಷೇತ್ರ’ದ ಮೂಲಕ ಸಂಗೀತ ಹಾಗೂ ‘ಕಾಕನಕೋಟೆ’ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು 20ಕ್ಕೂ ಹೆಚ್ಚಿನ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಸಂತ ಶಿಶುನಾಳ ಷರೀಫ, ಮೈಸೂರು ಮಲ್ಲಿಗೆ, ಚಿನ್ನಾರಿಮುತ್ತಾ, ಕೋಟ್ರೇಶಿ ಕನಸು ಮುಂತಾದ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡುವುದರ ಜೊತೆಗೆ ಗೀತೆಗಳನ್ನು ಸಹ ಹಾಡಿದ್ದರು. ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಅವರು ರೈತ ಗೀತೆಗೂ ಸಂಗೀತ ಸಂಯೋಜನೆ ಮಾಡಿದ್ದರು. ಅವರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವು ಪ್ರಶಸ್ತಿಗಳು ಸಂದಿವೆ.
‘ಕಾಣದ ಕಡಲಿಗೆ ಹಂಬಲಿಸಿದ ಮನ’, ‘ಮೈಸೂರು ಮಲ್ಲಿಗೆ’, ‘ಮಾಡು ಸಿಕ್ಕದಲ್ಲ’, ‘ಬಂದೇ ಬರತಾವ ಕಾಲ’, ‘ಸೋರುತಿಹುದು ಮನೆಯ ಮಾಳಿಗೆ’, ‘ಎಂಥಾ ಲೋಕವಯ್ಯ’ ಸೇರಿದಂತೆ ನೂರಾರು ಗೀತೆಗಳಿಗೆ ಅವರು ರಾಗ ಸಂಯೋಜನೆ ಮಾಡಿದ್ದರು.
ಸಂತ ಶಿಶುನಾಳ ಷರೀಫರ 75 ಗೀತೆಗಳನ್ನು 8 ಧ್ವನಿಸುರಳಿಗಳ ಮೂಲಕ ಕನ್ನಡಿಗರಿಗೆ ಪರಿಚಯಿಸಿದರು. ಕುವೆಂಪು, ದ.ರಾ.ಬೇಂದ್ರೆ, ಕೆ.ಎಸ್.ನರಸಿಂಹಸ್ವಾಮಿ, ಡಿ.ವಿ.ಗುಂಡಪ್ಪ, ಗೋಪಾಲಕೃಷ್ಣ ಅಡಿಗ, ಜಿ.ಎಸ್.ಶಿವರುದ್ರಪ್ಪ, ಎನ್.ಎಸ್.ಲ ಕ್ಷ್ಮಿನಾರಾಯಣಭಟ್ಟ, ಎಚ್.ಎಸ್.ವೆಂಕಟೇಶ್‌ಮೂರ್ತಿ, ಬಿ.ಆರ್.ಲಕ್ಷ್ಮಣರಾವ್ ಸೇರಿದಂತೆ ಹಲವು ಕವಿಗಳ ಕವಿತೆಗಳನ್ನು 79 ಸಂಗೀತ ಕ್ಯಾಸೆಟ್‌ಗಳಾಗಿ ಹೊರ ತಂದಿದ್ದಾರೆ.
23 ಸಿನಿಮಾ, ನಾಲ್ಕು ಸಾಕ್ಷ್ಯಚಿತ್ರ, 34 ನಾಟಕ, 24 ಧಾರಾವಾಹಿಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಅವರು 80ಕ್ಕೂ ಹೆಚ್ಚು ಧ್ವನಿಸುರಳಿಗಳನ್ನು ಹೊರ ತಂದಿದ್ದಾರೆ. ಕನ್ನಡ ಬಿಟ್ಟು ಬೇರೆ ಯಾವ ಭಾಷೆಯಲ್ಲೂ ಅವರು ಹಾಡಿದವರಲ್ಲ, ವಿದೇಶಗಳಿಗೆ ಹೋದಾಗಲೂ ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಲಿಲ್ಲ. ಸದಾ ಹೊಸ ಪ್ರಯೋಗಗಳಲ್ಲಿ ತೊಡಗುತ್ತಿದ್ದದ್ದು ಅವರ ಮತ್ತೊಂದು ಹೆಗ್ಗಳಿಕೆ.
ಉದ್ಯೋಗದಿಂದ ಸ್ವಯಂ ನಿವೃತ್ತಿ ನಂತರ ‘ಧ್ವನಿ’ ಸಂಸ್ಥೆಯನ್ನು ಹುಟ್ಟು ಹಾಕಿ ಅದರ ಮೂಲಕ ಯುವ ಪ್ರತಿಭೆಗಳನ್ನು ಶೋಧಿಸಿದರು. ಅಷ್ಟೇ ಅಲ್ಲದೆ ಮುಂದೆ ಆದರ್ಶ ಸುಗಮ ಸಂಗೀತ ಅಕಾಡೆಮಿಯನ್ನು ಸ್ಥಾಪಿಸಿ, ಯುವ ಪೀಳಿಗೆಗೆ ಸಂಗೀತವನ್ನು ಹೇಳಿಕೊಡುತ್ತಿದ್ದರು.
Subscribe to:
Post Comments (Atom)
No comments:
Post a Comment